ಬುಷ್‍ಮನ್
ದಕ್ಷಿಣ ಆಫ್ರಿಕದ ಒಂದು ಆದಿವಾಸಿ ಜನಾಂಗ. ಇವು ಶಾರೀರಿಕ ಮತ್ತು ಭಾಷಿಕ ಲಕ್ಷಣಗಳಲ್ಲಿ ಹಾಟನ್ ಟಾಟ್ ಜನರನ್ನು ತುಂಬ ಹೋಲುತ್ತಾರೆ. ಕೆಲವೊಮ್ಮೆ ಇವೆರಡೂ ಜನರನ್ನು ಖೊಯ್ಸನ್ ಎಂಬ ಹೆಸರಿನಿಂದ ಕರೆಯಲಾಗಿದೆ. ಇಂದು ಬುಷ್ ಮನ್ನರ ಸಂಖ್ಯೆ ಸುಮಾರು 55,000 ಎಂದು ಅಂದಾಜುಮಾಡಲಾಗಿದೆ. 

ಬೆಚುಯನ್ ಲ್ಯಾಂಡ್, ನೈಋತ್ಯ ಆಫ್ರಿಕ ಮತ್ತು ಅಂಗೋಲಗಳ ಶುಷ್ಕತರ ಪ್ರದೇಶಗಳಲ್ಲಿ ಹಂಚಿಹೋಗಿರುವ ಈ ಜನಾಂಗ ಹಿಂದೊಮ್ಮೆ ದಕ್ಷಿಣ ಮತ್ತು ಪೂರ್ವ ಆಫ್ರಿಕದ ಎಲ್ಲ ಕಡೆಯೂ ವಾಸಿಸಿತ್ತೆಂದು ಮಾನವ ಪಳೆಯುಳಿಕೆಗಳ ಅಧ್ಯಯನದಿಂದ ತಿಳಿದುಬರುತ್ತದೆ. ಮಧ್ಯ ಶಿಲಾಯುಗದ ಬಾಸ್ಕೊಪಾಯ್ಡ್ ಪೂರ್ವಜರಿಂದ ಬುಷ್ ಮನ್ನರು ಉಗಮಸಿದವರೆಂದು ಹೇಳಲಾಗಿದೆ. 

ಭಾಷಿಕವಾಗಿ ಈ ಜನರನ್ನು ಉತ್ತರ, ಮಧ್ಯ ಮತ್ತು ದಕ್ಷಿಣ ಬುಷ್ ಮನ್ನರೆಂದು ಮೂರು ಗುಂಪುಗಳಾಗಿ ವಿಂಗಡಿಸಿದೆ; ಇವುಗಳಲ್ಲಿ ಕೊನೆಯ ಗುಂಪು ಬಲು ಮಟ್ಟಿಗೆ ನಶಿಸಿಹೋಗಿದೆ. ಉಳಿದೆರಡು ಗುಂಪುಗಳು ಬಂಟು ಮತ್ತು ಯೂರೊಪಿಯನ್ ಜನರೊಡನೆ ಉಂಟಾದ ಸಂಬಂಧ ಸಂಪರ್ಕಗಳಿಂದಾಗಿ ತಮ್ಮ ಅಲೆಮಾರಿ ಸ್ವಭಾವ ಬಿಟ್ಟು ನೆಲೆನಿಂತಿವೆ. 

ಹಾಟನ್‍ಟಾಟ್ ಜನರನ್ನು ಹೊರತುಪಡಿಸಿ ಬುಷ್ ಮನ್ನರನ್ನು ಮೊದಲ ನೋಟದಲ್ಲಿಯೇ ಸುಲಭವಾಗಿ ಗುರುತಿಸಲು ಸಾಧ್ಯ. ಸಣ್ಣ ಆಕೃತಿ, ಸುರುಳಿ ಸಿಂಬಿ ಕೂದಲಿನ ಸಣ್ಣತಲೆ, ತ್ರಿಕೋನಾಕಾರವನ್ನು ಹೋಲುವ ಮುಖ, ಚಪ್ಪಟೆಮೂಗು, ತುಸು ಓರೆಯಾದ ಕಣ್ಣು, ಪುಟ್ಟ ಅಂಗೈ ಅಂಗಾಲುಗಳಿಂದ ಕೂಡಿದ ಈ ಜನರು ಹಳದಿ ಅಥವಾ ಹಳದಿಮಿಶ್ರಿತ ಕಂದುಬಣ್ಣದ ಆರೋಗ್ಯವಂತ ದೃಢಕಾಯರು. 

ಈಗ ಕಲಹರಿ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರವೇ ಅಪ್ಪಟ ಬುಷ್ ಮನ್ನರು ಕಾಣಸಿಗುತ್ತಾರೆ. ಕಳೆದ ಶತಮಾನದಲ್ಲಿ ಇವರು ಹೆಚ್ಚು ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ವಿಷಯ ಯೂರೊಪಿಯನ್ ಪ್ರವಾಸಿಗರ ವೃತ್ತಾಂತಗಳಿಂದ ತಿಳಿದುಬರುತ್ತದೆ. ಬುಷ್ ಮನ್ನರ ಜೀವನ ವಿಧಾನವನ್ನು ತಿಳಿಯಲು ಈ ವೃತ್ತಾಂತಗಳು ಬಲುಮಟ್ಟಿಗೆ ಸಹಾಯಕವಾಗಿವೆ. 

ಬುಷ್ ಮನ್ನರ ಭೌತಿಕ ಸಂಸ್ಕøತಿ ಮತ್ತು ಸಾಮಾಜಿಕ ವ್ಯವಸ್ಥೆ ಅತ್ಯಂತ ಸರಳವಾದ್ದು. ಮೂವತ್ತರಿಂದ ನೂರರವರೆಗೆ ಸಣ್ಣ ಸಣ್ಣ ಬೇಟೆ ಗುಂಪುಗಳಾಗಿ ವಾಸಿಸುವ ಈ ಜನರಿಗೆ ಆಯಾ ಗುಂಪಿನ ಹಿರಿಯ ಅನುಭವಿಯ ಮಾರ್ಗದರ್ಶನವಿರುತ್ತದೆ. ಪ್ರಾಣಿಗಳ ಸ್ವಭಾವ ಇವರಿಗೆ ಸುಪರಿಚಿತ. ದನಕರುಗಳನ್ನು ಬೇಟೆಯಾಡುತ್ತಿದ್ದುದರಿಂದ ಸ್ವಾಭಾವಿಕವಾಗಿಯೇ ಇವರಿಗೂ ರೈತಾಪಿವರ್ಗದ ಜನರಿಗೂ ತಿಕ್ಕಾಟ ಉಂಟಾಯಿತು; ಪರಿಣಾಮವಾಗಿಯೇ ಬುಷ್ ಮನ್ನರು ಪಲಾಯನ ಮಾಡುತ್ತ ಕಲಹರಿ ಮರುಭೂಮಿಯತ್ತ ಸಾಗಬೇಕಾಯಿತು. ಇವರ ಮುಖ್ಯ ಆಯುಧ ಬಿಲ್ಲು ಮತ್ತು ವಿಷಪೂರಿತ ಬಾಣ. ಗಂಡಸರು ಬೇಟೆ ಮತ್ತು ಜೇನು ಸಂಗ್ರಹಣೆಯಲ್ಲಿ ನಿರತವಾಗಿದ್ದರೆ ಹೆಂಗಸರು ಗೆಡ್ಡೆಗೆಣಸುಗಳನ್ನು ಶೇಖರಿಸುತ್ತಾರೆ. ಇವರಿಗೆ ನಿರ್ದಿಷ್ಟ ಆಹಾರವೆಂಬುದಿಲ್ಲ. ಹಾವು ಹುಳು ಹಲ್ಲಿ ಸಹ ಇವರ ಆಹಾರ; ಇರುವೆ ಮೊಟ್ಟೆ ಹೆಚ್ಚುಪ್ರಿಯ. ಇವರು ಆಡುವ ಭಾಷೆ ಹಾಟನ್ ಟಾಟರು ಆಡುವ ಭಾಷೆಗೆ ಹತ್ತಿರವಾದ್ದು. ಏಕಾಕ್ಷರ ಲಿಪಿಯಿಂದ ಕೂಡಿದ ಇವರ ಭಾಷೆ ಉಚ್ಚಾರಮಾಡಲು ಕಷ್ಟವಾದ್ದು. ಇದನ್ನು ಕ್ಲಿಕ್ ಲ್ಯಾಂಗ್ವೇಜ್ ಎಂದು ಕರೆಯುತ್ತಾರೆ. 

ಪ್ರಾಣಿಚರ್ಮ, ಮರದ ತೊಗಟೆ ಹಾಗೂ ಎಲೆಗಳಿಂದ ಇವರು ತಮ್ಮ ಉಡುಪನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಗಂಡಸರು ತೀರ ಕಡಿಮೆ ಬಟ್ಟೆ, ಹೆಂಗಸರು ಸೊಂಟದಿಂದ ಮೊಣಕಾಲಿನವರೆಗೆ ಮಾತ್ರ ಬಟ್ಟೆ ಧರಿಸುತ್ತಾರೆ. ರಾತ್ರಿಯ ವೇಳೆ ಚಳಿ ಮತ್ತು ಹಿಮದಿಂದ ರಕ್ಷಿಸಿಕೊಳ್ಳಲು ಟೋಪಿ ಧರಿಸುವುದುಂಟು. ಗಾಳಿ ತಡೆಯುವ ತಡಿಕೆಗಳಷ್ಟೇ ಇವರ ಆಶ್ರಯಸ್ಥಾನ. ಹಿಂದೆ ಎಂದರೆ ಕಲಹರಿ ಪ್ರದೇಶಕ್ಕೆ ವಲಸೆಹೋಗುವ ಮೊದಲು ಇವರ ವಸತಿ ನಿಸರ್ಗದತ್ತವಾದ ಗುಹೆ ಅಥವಾ ಕಲಾತ್ಮಕ ಗುಣದವಾಗಿದ್ದು ಗಮನಾರ್ಹವೆನಿಸಿವೆ. ಈ ಚಿತ್ರಗಳು ಉತ್ತರ ಶಿಲಾಯುಗದ ಬುಷ್ ಮನ್ನರ ಜೀವನ ಮತು ಹವ್ಯಾಸಗಳನ್ನು ಕುರಿತ ಒಂದು ಪ್ರಮುಖ ದಾಖಲೆ ಎನಿಸಿವೆ. ಇವುಗಳಲ್ಲಿ ಬೇಟೆ ಮತ್ತು ಗೃಹ ಜೀವನಕ್ಕೆ ಸಂಬಂಧಿಸಿದ ದೃಶ್ಯಗಳಿವೆ. 
ಇಂದು ಕೆಲವು ಭಾಗಗಳಲ್ಲಿ ಬುಷ್ ಮನ್ನರು ವಾಸಿಸಿದ್ದ ಕುರುಹುಗಳು ಹೇರಳವಾಗಿ ಕಂಡುಬಂದರೂ ಆ ಭಾಗಗಳಲ್ಲಿ ಬುಷ್ ಮನ್ನರು ಕಾಣಸಿಗುವುದಿಲ್ಲ. 
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ